Kannada Meal — Hamza Butur — Gâşiye 88:1 – Nas 114:6
Contents
- Gâşiye 88:1
- Gâşiye 88:2
- Gâşiye 88:3
- Gâşiye 88:4
- Gâşiye 88:5
- Gâşiye 88:6
- Gâşiye 88:7
- Gâşiye 88:8
- Gâşiye 88:9
- Gâşiye 88:10
- Gâşiye 88:11
- Gâşiye 88:12
- Gâşiye 88:13
- Gâşiye 88:14
- Gâşiye 88:15
- Gâşiye 88:16
- Gâşiye 88:17
- Gâşiye 88:18
- Gâşiye 88:19
- Gâşiye 88:20
- Gâşiye 88:21
- Gâşiye 88:22
- Gâşiye 88:23
- Gâşiye 88:24
- Gâşiye 88:25
- Gâşiye 88:26
- Fecr 89:1
- Fecr 89:2
- Fecr 89:3
- Fecr 89:4
- Fecr 89:5
- Fecr 89:6
- Fecr 89:7
- Fecr 89:8
- Fecr 89:9
- Fecr 89:10
- Fecr 89:11
- Fecr 89:12
- Fecr 89:13
- Fecr 89:14
- Fecr 89:15
- Fecr 89:16
- Fecr 89:17
- Fecr 89:18
- Fecr 89:19
- Fecr 89:20
- Fecr 89:21
- Fecr 89:22
- Fecr 89:23
- Fecr 89:24
- Fecr 89:25
- Fecr 89:26
- Fecr 89:27
- Fecr 89:28
- Fecr 89:29
- Fecr 89:30
- Beled 90:1
- Beled 90:2
- Beled 90:3
- Beled 90:4
- Beled 90:5
- Beled 90:6
- Beled 90:7
- Beled 90:8
- Beled 90:9
- Beled 90:10
- Beled 90:11
- Beled 90:12
- Beled 90:13
- Beled 90:14
- Beled 90:15
- Beled 90:16
- Beled 90:17
- Beled 90:18
- Beled 90:19
- Beled 90:20
- Şems 91:1
- Şems 91:2
- Şems 91:3
- Şems 91:4
- Şems 91:5
- Şems 91:6
- Şems 91:7
- Şems 91:8
- Şems 91:9
- Şems 91:10
- Şems 91:11
- Şems 91:12
- Şems 91:13
- Şems 91:14
- Şems 91:15
- Leyl 92:1
- Leyl 92:2
- Leyl 92:3
- Leyl 92:4
- Leyl 92:5
- Leyl 92:6
- Leyl 92:7
- Leyl 92:8
- Leyl 92:9
- Leyl 92:10
- Leyl 92:11
- Leyl 92:12
- Leyl 92:13
- Leyl 92:14
- Leyl 92:15
- Leyl 92:16
- Leyl 92:17
- Leyl 92:18
- Leyl 92:19
- Leyl 92:20
- Leyl 92:21
- Duhâ 93:1
- Duhâ 93:2
- Duhâ 93:3
- Duhâ 93:4
- Duhâ 93:5
- Duhâ 93:6
- Duhâ 93:7
- Duhâ 93:8
- Duhâ 93:9
- Duhâ 93:10
- Duhâ 93:11
- İnşirah 94:1
- İnşirah 94:2
- İnşirah 94:3
- İnşirah 94:4
- İnşirah 94:5
- İnşirah 94:6
- İnşirah 94:7
- İnşirah 94:8
- Tin 95:1
- Tin 95:2
- Tin 95:3
- Tin 95:4
- Tin 95:5
- Tin 95:6
- Tin 95:7
- Tin 95:8
- Alak 96:1
- Alak 96:2
- Alak 96:3
- Alak 96:4
- Alak 96:5
- Alak 96:6
- Alak 96:7
- Alak 96:8
- Alak 96:9
- Alak 96:10
- Alak 96:11
- Alak 96:12
- Alak 96:13
- Alak 96:14
- Alak 96:15
- Alak 96:16
- Alak 96:17
- Alak 96:18
- Alak 96:19
- Kadr 97:1
- Kadr 97:2
- Kadr 97:3
- Kadr 97:4
- Kadr 97:5
- Beyyine 98:1
- Beyyine 98:2
- Beyyine 98:3
- Beyyine 98:4
- Beyyine 98:5
- Beyyine 98:6
- Beyyine 98:7
- Beyyine 98:8
- Zilzal 99:1
- Zilzal 99:2
- Zilzal 99:3
- Zilzal 99:4
- Zilzal 99:5
- Zilzal 99:6
- Zilzal 99:7
- Zilzal 99:8
- Adiyat 100:1
- Adiyat 100:2
- Adiyat 100:3
- Adiyat 100:4
- Adiyat 100:5
- Adiyat 100:6
- Adiyat 100:7
- Adiyat 100:8
- Adiyat 100:9
- Adiyat 100:10
- Adiyat 100:11
- Karia 101:1
- Karia 101:2
- Karia 101:3
- Karia 101:4
- Karia 101:5
- Karia 101:6
- Karia 101:7
- Karia 101:8
- Karia 101:9
- Karia 101:10
- Karia 101:11
- Tekâsür 102:1
- Tekâsür 102:2
- Tekâsür 102:3
- Tekâsür 102:4
- Tekâsür 102:5
- Tekâsür 102:6
- Tekâsür 102:7
- Tekâsür 102:8
- Asr 103:1
- Asr 103:2
- Asr 103:3
- Hümezeh 104:1
- Hümezeh 104:2
- Hümezeh 104:3
- Hümezeh 104:4
- Hümezeh 104:5
- Hümezeh 104:6
- Hümezeh 104:7
- Hümezeh 104:8
- Hümezeh 104:9
- Fil 105:1
- Fil 105:2
- Fil 105:3
- Fil 105:4
- Fil 105:5
- Kureyş 106:1
- Kureyş 106:2
- Kureyş 106:3
- Kureyş 106:4
- Mâûn 107:1
- Mâûn 107:2
- Mâûn 107:3
- Mâûn 107:4
- Mâûn 107:5
- Mâûn 107:6
- Mâûn 107:7
- Kevser 108:1
- Kevser 108:2
- Kevser 108:3
- Kâfirun 109:1
- Kâfirun 109:2
- Kâfirun 109:3
- Kâfirun 109:4
- Kâfirun 109:5
- Kâfirun 109:6
- Nasr 110:1
- Nasr 110:2
- Nasr 110:3
- Tebbet 111:1
- Tebbet 111:2
- Tebbet 111:3
- Tebbet 111:4
- Tebbet 111:5
- İhlas 112:1
- İhlas 112:2
- İhlas 112:3
- İhlas 112:4
- Felak 113:1
- Felak 113:2
- Felak 113:3
- Felak 113:4
- Felak 113:5
- Nas 114:1
- Nas 114:2
- Nas 114:3
- Nas 114:4
- Nas 114:5
- Nas 114:6
Gâşiye 88:1
ಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ?
Gâşiye 88:2
ಅಂದು ಬಹಳಷ್ಟು ಮುಖಗಳು ದೀನವಾಗಿರುವುವು.
Gâşiye 88:3
ಅವರು ಪರಿಶ್ರಮಪಟ್ಟಿರುವರು ಮತ್ತು ಸುಸ್ತಾಗಿರುವರು.
Gâşiye 88:4
ಅವರು ತೀವ್ರ ಶಾಖದ ಬೆಂಕಿಯನ್ನು ಪ್ರವೇಶ ಮಾಡುವರು.
Gâşiye 88:5
ಕೊತಕೊತ ಕುದಿಯುವ ಒರತೆಯ ನೀರನ್ನು ಅವರಿಗೆ ಕುಡಿಸಲಾಗುವುದು.
Gâşiye 88:6
ಅವರಿಗೆ ಮುಳ್ಳಿನ ಮರದಿಂದಲೇ ಹೊರತು ಬೇರೆ ಯಾವುದೇ ಆಹಾರವಿಲ್ಲ.
Gâşiye 88:7
ಅದು ಪೋಷಣೆ ನೀಡುವುದಿಲ್ಲ. ಹಸಿವೆಯನ್ನು ನೀಗಿಸುವುದಿಲ್ಲ.
Gâşiye 88:8
ಅಂದು ಬಹಳಷ್ಟು ಮುಖಗಳು ಶುಭ್ರ ತಾಜಾತನದಿಂದ ಹೊಳೆಯುತ್ತಿರುವುವು.
Gâşiye 88:9
ಅವರು ತಮ್ಮ ಪರಿಶ್ರಮದ ಬಗ್ಗೆ ಸಂತೃಪ್ತರಾಗಿರುವರು.
Gâşiye 88:10
ಅವರು ಉನ್ನತ ಸ್ವರ್ಗಗಳಲ್ಲಿರುವರು.
Gâşiye 88:11
ಅವರು ಅಲ್ಲಿ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ.
Gâşiye 88:12
ಅದರಲ್ಲಿ ಹರಿಯುವ ತೊರೆಯಿದೆ.
Gâşiye 88:13
ಅಲ್ಲಿ ಎತ್ತರದ ಮಂಚಗಳಿವೆ.
Gâşiye 88:14
ಜೋಡಿಸಿಡಲಾದ ಲೋಟಗಳಿವೆ.
Gâşiye 88:15
ಸಾಲಾಗಿಡಲಾದ ದಿಂಬುಗಳಿವೆ.
Gâşiye 88:16
ಹರಡಿಕೊಂಡಿರುವ ಜಮಖಾನೆಗಳಿವೆ.
Gâşiye 88:17
ಅವರು ಒಂಟೆಯನ್ನು ನೋಡುವುದಿಲ್ಲವೇ—ಅದನ್ನು ಹೇಗೆ ಸೃಷ್ಟಿಸಲಾಗಿದೆಯೆಂದು?
Gâşiye 88:18
ಆಕಾಶವನ್ನು—ಅದನ್ನು ಹೇಗೆ ಎತ್ತರಿಸಲಾಗಿದೆಯೆಂದು?
Gâşiye 88:19
ಪರ್ವತಗಳನ್ನು—ಅವುಗಳನ್ನು ಹೇಗೆ ದೃಢವಾಗಿ ನಿಲ್ಲಿಸಲಾಗಿದೆಯೆಂದು?
Gâşiye 88:20
ಭೂಮಿಯನ್ನು—ಅದನ್ನು ಹೇಗೆ ಹರಡಲಾಗಿದೆಯೆಂದು?
Gâşiye 88:21
(ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನೀವೊಬ್ಬ ಉಪದೇಶಕರು ಮಾತ್ರ.
Gâşiye 88:22
ನೀವು ಅವರ ಮೇಲೆ ಅಧಿಕಾರವಿರುವವರಲ್ಲ.
Gâşiye 88:23
ಆದರೆ ವಿಮುಖನಾಗುವವನು ಮತ್ತು ನಿಷೇಧಿಸುವವನು ಯಾರೋ,
Gâşiye 88:24
ಅವನಿಗೆ ಅಲ್ಲಾಹು ಅತಿದೊಡ್ಡ ಶಿಕ್ಷೆಯನ್ನು ನೀಡುವನು.
Gâşiye 88:25
ನಿಶ್ಚಯವಾಗಿಯೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ.
Gâşiye 88:26
ನಂತರ ಅವರನ್ನು ವಿಚಾರಣೆ ಮಾಡುವುದು ನಮ್ಮ ಹೊಣೆಯಾಗಿದೆ.
Fecr 89:1
ಪ್ರಭಾತದ ಮೇಲಾಣೆ!
Fecr 89:2
ಹತ್ತು ರಾತ್ರಿಗಳ ಮೇಲಾಣೆ![1]
———
[1] ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನ-ರಾತ್ರಿಗಳು.
Fecr 89:3
ಸಮ ಮತ್ತು ಬೆಸಗಳ ಮೇಲಾಣೆ!
Fecr 89:4
ರಾತ್ರಿಯ ಮೇಲಾಣೆ! ಅದು ಚಲಿಸತೊಡಗುವಾಗ.
Fecr 89:5
ಇವುಗಳಲ್ಲಿ ಬುದ್ಧಿಯಿರುವವನ ಮಟ್ಟಿಗೆ ಪರ್ಯಾಪ್ತ ಆಣೆಯಿದೆಯೇ?
Fecr 89:6
ನಿಮ್ಮ ಪರಿಪಾಲಕನು (ಅಲ್ಲಾಹು) ಆದ್ ಗೋತ್ರದವರೊಂದಿಗೆ ಏನು ಮಾಡಿದನೆಂದು ನೀವು ನೋಡಿಲ್ಲವೇ?
Fecr 89:7
ಸ್ತಂಭಗಳ ಜನರಾದ ಇರಮ್ ಗೋತ್ರದವರೊಂದಿಗೆ.[1]
———
[1] ಇರಮ್ ಎಂದರೆ ಆದ್ ಗೋತ್ರದವರ ಪೂರ್ವ ಪಿತಾಮಹನ ಹೆಸರು. ಈತನ ಸಂತಾನ ಪರಂಪರೆಯೇ ಆದ್ ಗೋತ್ರ. ಸ್ತಂಭಗಳ ಜನರು ಎಂಬ ನುಡಿಗಟ್ಟು ಅವರ ಶಕ್ತಿ ಮತ್ತು ದೇಹದಾರ್ಢ್ಯವನ್ನು ಸೂಚಿಸುತ್ತದೆ.
Fecr 89:8
ಅವರಂತಿರುವ ಜನರನ್ನು ಯಾವುದೇ ಊರಲ್ಲೂ ಸೃಷ್ಟಿಸಲಾಗಿಲ್ಲ.
Fecr 89:9
ಕಣಿವೆಯಲ್ಲಿ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಗೋತ್ರದವರೊಂದಿಗೆ.
Fecr 89:10
ಗೂಟಗಳ ಒಡೆಯನಾದ ಫರೋಹನೊಂದಿಗೆ.[1]
———
[1] ಗೂಟಗಳ ಒಡೆಯ ಎಂದರೆ ಮಹಾ ಸೈನ್ಯವನ್ನು ಹೊಂದಿರುವವನು ಎಂದರ್ಥ. ಈತ ಜನರನ್ನು ಮೊಳೆ ಬಡಿದು ಶಿಕ್ಷಿಸುತ್ತಿದ್ದ ಎಂಬ ಅರ್ಥದಲ್ಲೂ ಈತನನ್ನು ಗೂಟಗಳ (ಮೊಳೆಗಳ) ಒಡೆಯ ಎಂದು ಕರೆಯಲಾಗಿರಬಹುದು.
Fecr 89:11
ಅವರೆಲ್ಲರೂ ಊರುಗಳಲ್ಲಿ ಅತಿರೇಕವೆಸಗುತ್ತಿದ್ದರು.
Fecr 89:12
ಕಿಡಿಗೇಡಿತನವನ್ನು ಅತಿಯಾಗಿ ಹಬ್ಬಿಸಿದ್ದರು.
Fecr 89:13
ಕೊನೆಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರ ಮೇಲೆ ಶಿಕ್ಷೆಯ ಕೊರಡನ್ನು ಸುರಿಸಿದನು.
Fecr 89:14
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ನಿಗಾವಣೆಯಲ್ಲಿದ್ದಾನೆ.[1]
———
[1] ಅಂದರೆ ಅವನು ಎಲ್ಲವನ್ನೂ ಗಮನಿಸುತ್ತಿದ್ದಾನೆ. ಎಲ್ಲವೂ ಅವನ ನಿಗಾದಲ್ಲಿದೆ.
Fecr 89:15
ಮನುಷ್ಯನ ಸ್ಥಿತಿ ಹೇಗಿದೆಯೆಂದರೆ, ಅವನ ಪರಿಪಾಲಕನು (ಅಲ್ಲಾಹು) ಅವನನ್ನು ಪರೀಕ್ಷಿಸಿ ಅವನಿಗೆ ಗೌರವ ಮತ್ತು ಅನುಗ್ರಹವನ್ನು ದಯಪಾಲಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಗಣ್ಯ ವ್ಯಕ್ತಿಯಾಗಿ ಮಾಡಿದ್ದಾನೆ.”
Fecr 89:16
ಆದರೆ ಅವನು ಮನುಷ್ಯನನ್ನು ಪರೀಕ್ಷಿಸಿ ಅವನ ಉಪಜೀವನವನ್ನು ಇಕ್ಕಟ್ಟುಗೊಳಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ನಿಂದನಾರ್ಹನಾಗಿ ಮಾಡಿದ್ದಾನೆ.”
Fecr 89:17
ಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಅನಾಥರಿಗೆ ಗೌರವ ನೀಡುವುದಿಲ್ಲ.
Fecr 89:18
ಬಡವರಿಗೆ ಅನ್ನ ನೀಡಲು ಪರಸ್ಪರ ಉತ್ತೇಜಿಸುವುದಿಲ್ಲ.
Fecr 89:19
ನೀವು ಉತ್ತರಾಧಿಕಾರದ ಆಸ್ತಿಯನ್ನು ಬಾಚಿ ಬಾಚಿ ತಿನ್ನುತ್ತೀರಿ.
Fecr 89:20
ನೀವು ಧನವನ್ನು ಅತಿಯಾಗಿ ಪ್ರೀತಿಸುತ್ತೀರಿ.
Fecr 89:21
ಅಲ್ಲ (ನಿಮ್ಮ ಸ್ಥಿತಿ ಹಾಗಾಗಬಾರದು). ಭೂಮಿಯನ್ನು ಸಂಪೂರ್ಣ ಪುಡಿ ಮಾಡಿ ಸಮತಟ್ಟುಗೊಳಿಸುವಾಗ.
Fecr 89:22
ನಿಮ್ಮ ಪರಿಪಾಲಕನು (ಅಲ್ಲಾಹು) ಬರುವಾಗ ಮತ್ತು ಸಾಲುಸಾಲಾಗಿ ದೇವದೂತರುಗಳು ಬರುವಾಗ.
Fecr 89:23
ಆ ದಿನ ನರಕವನ್ನು ತರಲಾಗುವುದು. ಅಂದು ಮನುಷ್ಯನಿಗೆ ಮನವರಿಕೆಯಾಗುವುದು. ಆದರೆ ಆಗ ಮನವರಿಕೆಯಾಗುವುದರಿಂದ ಏನು ಪ್ರಯೋಜನ?
Fecr 89:24
ಅವನು ಹೇಳುವನು: “ಅಯ್ಯೋ! ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಸಿದ್ಧತೆಗಳನ್ನು ಮಾಡಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”
Fecr 89:25
ಅಂದು ಅಲ್ಲಾಹು ನೀಡುವಂತಹ (ಕಠೋರ) ಶಿಕ್ಷೆಯನ್ನು ನೀಡಲು ಯಾರಿಗೂ ಸಾಧ್ಯವಿಲ್ಲ.
Fecr 89:26
ಅವನು ಹಿಡಿದು ಬಂಧಿಸುವಂತೆ ಹಿಡಿದು ಬಂಧಿಸಲು ಯಾರಿಗೂ ಸಾಧ್ಯವಿಲ್ಲ.
Fecr 89:27
ಓ ಸಮಾಧಾನದಲ್ಲಿರುವ ಆತ್ಮವೇ!
Fecr 89:28
ನಿನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳು—ನೀನು ಅವನ ಬಗ್ಗೆ ಸಂಪ್ರೀತನಾಗಿರುವ ಮತ್ತು ಅವನು ನಿನ್ನ ಬಗ್ಗೆ ಸಂಪ್ರೀತನಾಗಿರುವ ಸ್ಥಿತಿಯಲ್ಲಿ.
Fecr 89:29
ನನ್ನ ವಿಶೇಷ ದಾಸರೊಡನೆ ಸೇರಿಕೋ.
Fecr 89:30
ನನ್ನ ಸ್ವರ್ಗಕ್ಕೆ ಪ್ರವೇಶಿಸು.
Beled 90:1
ನಾನು ಈ ನಗರದ (ಮಕ್ಕಾದ) ಮೇಲೆ ಆಣೆ ಮಾಡುತ್ತೇನೆ.
Beled 90:2
ನೀವು ಈ ನಗರದ ವಾಸಿಯಾಗಿರುವಿರಿ.
Beled 90:3
ತಂದೆ ಮತ್ತು ಮಕ್ಕಳ ಮೇಲಾಣೆ!
Beled 90:4
ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಬಹಳ ಕಷ್ಟಪಡುವಂತೆ ಸೃಷ್ಟಿಸಿದ್ದೇವೆ.
Beled 90:5
ಅವನು ಯಾರ ನಿಯಂತ್ರಣದಲ್ಲೂ ಇಲ್ಲವೆಂದು ಅವನು ಭಾವಿಸುತ್ತಾನೆಯೇ?
Beled 90:6
ಅವನು ಹೇಳುತ್ತಾನೆ: “ನಾನು ಹೇರಳ ಸಂಪತ್ತು ಖರ್ಚು ಮಾಡಿದ್ದೇನೆ.”
Beled 90:7
ಅವನನ್ನು ಯಾರೂ ನೋಡುವುದಿಲ್ಲವೆಂದು ಅವನು ಭಾವಿಸುತ್ತಾನೆಯೇ?
Beled 90:8
ಅವನಿಗೆ ನಾವು ಎರಡು ಕಣ್ಣುಗಳನ್ನು ಕೊಡಲಿಲ್ಲವೇ?
Beled 90:9
ಒಂದು ನಾಲಗೆ ಮತ್ತು ಎರಡು ತುಟಿಗಳನ್ನು?
Beled 90:10
ನಾವು ಅವನಿಗೆ ಎರಡು ಸ್ಪಷ್ಟ ಮಾರ್ಗಗಳನ್ನು ತೋರಿಸಿಕೊಟ್ಟೆವು.
Beled 90:11
ಆದರೆ ಅವನು ಆ ಘಾಟಿಯಲ್ಲಿ ಪ್ರವೇಶ ಮಾಡಿಲ್ಲ.
Beled 90:12
ಆ ಘಾಟಿ ಏನೆಂದು ನಿಮಗೇನು ಗೊತ್ತು?
Beled 90:13
ಅದು ಗುಲಾಮನನ್ನು ಸ್ಪತಂತ್ರಗೊಳಿಸುವುದು,
Beled 90:14
ಅಥವಾ ಹಸಿವಿನ ದಿನದಲ್ಲಿ ಅನ್ನ ನೀಡುವುದು.
Beled 90:15
ಸಂಬಂಧಿಕನಾದ ಅನಾಥನಿಗೆ,
Beled 90:16
ಅಥವಾ ಬಡತನದಲ್ಲಿರುವ ದರಿದ್ರನಿಗೆ.
Beled 90:17
ನಂತರ ಸತ್ಯವಿಶ್ವಾಸಿಗಳಲ್ಲಿ ಮತ್ತು ತಾಳ್ಮೆಯ ಉಪದೇಶ ನೀಡುವವರು ಹಾಗೂ ದಯೆಯ ಉಪದೇಶ ನೀಡುವವರಲ್ಲಿ ಸೇರುವುದು.
Beled 90:18
ಅವರೇ ಬಲಭಾಗದ ಜನರು.
Beled 90:19
ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ಎಡಭಾಗದ ಜನರು.
Beled 90:20
ಬೆಂಕಿಯು ಎಲ್ಲಾ ಕಡೆಗಳಿಂದಲೂ ಅವರನ್ನು ಮುಚ್ಚಿಕೊಳ್ಳುವುದು.
Şems 91:1
ಸೂರ್ಯ ಮತ್ತು ಅದರ ಬೆಳಕಿನ ಮೇಲಾಣೆ!
Şems 91:2
ಚಂದ್ರನ ಮೇಲಾಣೆ! ಅದು ಸೂರ್ಯನನ್ನು ಹಿಂಬಾಲಿಸುವಾಗ.
Şems 91:3
ಹಗಲಿನ ಮೇಲಾಣೆ! ಅದು ಸೂರ್ಯನನ್ನು ಬೆಳಗಿಸುವಾಗ.
Şems 91:4
ರಾತ್ರಿಯ ಮೇಲಾಣೆ! ಅದು ಸೂರ್ಯನನ್ನು ಮುಚ್ಚುವಾಗ.
Şems 91:5
ಆಕಾಶ ಮತ್ತು ಅದನ್ನು ನಿರ್ಮಿಸಿದವನ ಮೇಲಾಣೆ!
Şems 91:6
ಭೂಮಿ ಮತ್ತು ಅದನ್ನು ವಿಸ್ತರಿಸಿದವನ ಮೇಲಾಣೆ!
Şems 91:7
ಆತ್ಮ ಮತ್ತು ಅದನ್ನು ಸರಿಪಡಿಸಿದವನ ಮೇಲಾಣೆ!
Şems 91:8
ನಂತರ ಅವನು ಅದಕ್ಕೆ ದುಷ್ಕರ್ಮದ ಬಗ್ಗೆ ಮತ್ತು ರಕ್ಷಾಮಾರ್ಗದ ಬಗ್ಗೆ ತಿಳಿಸಿದನು.[1]
———
[1] ಅಂದರೆ ಪ್ರವಾದಿಗಳನ್ನು ಕಳುಹಿಸುವ ಮೂಲಕ ಮತ್ತು ಗ್ರಂಥಗಳನ್ನು ಅವತೀರ್ಣಗೊಳಿಸುವ ಮೂಲಕ ಅಲ್ಲಾಹು ಮನುಷ್ಯನಿಗೆ ಒಳಿತು ಮತ್ತು ಕೆಡುಕುಗಳನ್ನು ತಿಳಿಸಿಕೊಟ್ಟಿದ್ದಾನೆ. ಅಥವಾ ಮನುಷ್ಯನ ಸಹಜ ಮನೋಧರ್ಮದಲ್ಲೇ ಒಳಿತನ್ನು ಸ್ವೀಕರಿಸುವ ಮತ್ತು ಕೆಡುಕಿನಿಂದ ದೂರವಾಗುವ ಇಚ್ಛಾಶಕ್ತಿಯನ್ನು ತುಂಬಲಾಗಿದೆ.
Şems 91:9
ಅದನ್ನು ಪರಿಶುದ್ಧಗೊಳಿಸಿದವನು ಯಶಸ್ವಿಯಾದನು.
Şems 91:10
ಅದನ್ನು ಮಲಿನಗೊಳಿಸಿದವನು ವಿಫಲನಾದನು.
Şems 91:11
ಸಮೂದ್ ಗೋತ್ರದವರು ತಮ್ಮ ಅತಿರೇಕದಿಂದಾಗಿ (ಸತ್ಯವನ್ನು) ನಿಷೇಧಿಸಿದರು.
Şems 91:12
ಅವರಲ್ಲಿನ ಅತ್ಯಂತ ನತದೃಷ್ಟನು ಎದ್ದು ನಿಂತ ಸಂದರ್ಭ.
Şems 91:13
ಆಗ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಅವರೊಡನೆ ಹೇಳಿದರು: “ಅಲ್ಲಾಹನ ಒಂಟೆ ಮತ್ತು ಅದರ ಜಲಪಾನದ ಬಗ್ಗೆ (ಎಚ್ಚರವಹಿಸಿರಿ).”
Şems 91:14
ಆದರೆ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಒಂಟೆಯ ಕಾಲುಗಳನ್ನು ಕಡಿದರು. ಆಗ ಅವರ ಪಾಪಗಳ ಕಾರಣದಿಂದ ಅವರ ಪರಿಪಾಲಕನು (ಅಲ್ಲಾಹು) ಅವರ ಮೇಲೆ ವಿನಾಶವನ್ನು ತಂದನು. ಅವನು ಅದನ್ನು (ಅವರೆಲ್ಲರಿಗೂ) ಸಮಾನಗೊಳಿಸಿದನು.
Şems 91:15
ಅದರ ಅನಂತರ ಫಲದ ಬಗ್ಗೆ ಅವನು ಭಯಪಡುವುದಿಲ್ಲ.
Leyl 92:1
ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.
Leyl 92:2
ಹಗಲಿನ ಮೇಲಾಣೆ! ಅದು ಬೆಳಕು ಬೀರುವಾಗ.
Leyl 92:3
ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನ ಮೇಲಾಣೆ!
Leyl 92:4
ನಿಶ್ಚಯವಾಗಿಯೂ ನಿಮ್ಮ ಪರಿಶ್ರಮಗಳು ವಿಭಿನ್ನವಾಗಿವೆ.
Leyl 92:5
(ಅಲ್ಲಾಹನ ಮಾರ್ಗದಲ್ಲಿ) ನೀಡಿದವನು ಮತ್ತು (ಅಲ್ಲಾಹನನ್ನು) ಭಯಪಟ್ಟವನು ಯಾರೋ,
Leyl 92:6
ಮತ್ತು ಒಳಿತಿನಲ್ಲಿ ನಂಬಿಕೆಯಿಡುವವನು ಯಾರೋ,
Leyl 92:7
ನಾವು ಅವನಿಗೆ ಸುಲಭವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು.
Leyl 92:8
ಆದರೆ ಜಿಪುಣತನ ತೋರಿದವನು ಮತ್ತು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಬಗೆದವನು ಯಾರೋ,
Leyl 92:9
ಮತ್ತು ಒಳಿತಿನಲ್ಲಿ ನಂಬಿಕೆಯಿಡದವನು ಯಾರೋ,
Leyl 92:10
ನಾವು ಅವನಿಗೆ ಕಷ್ಟವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು.
Leyl 92:11
ಅವನು (ನರಕಕ್ಕೆ) ಬೀಳುವಾಗ ಅವನ ಸಂಪತ್ತು ಅವನ ಪ್ರಯೋಜನಕ್ಕೆ ಬರುವುದಿಲ್ಲ.
Leyl 92:12
ನಿಶ್ಚಯವಾಗಿಯೂ ಸನ್ಮಾರ್ಗವನ್ನು ತೋರಿಸುವುದು ನಮ್ಮ ಹೊಣೆಯಾಗಿದೆ.
Leyl 92:13
ನಿಶ್ಚಯವಾಗಿಯೂ ಪರಲೋಕ ಮತ್ತು ಇಹಲೋಕಗಳು ನಮ್ಮ ವಶದಲ್ಲಿವೆ.
Leyl 92:14
ನಾನು ನಿಮಗೆ ಧಗಧಗಿಸುವ ಅಗ್ನಿಯ ಬಗ್ಗೆ ಎಚ್ಚರಿಕೆ ನೀಡಿದ್ದೇನೆ.
Leyl 92:15
ಅತ್ಯಂತ ನತದೃಷ್ಟನಲ್ಲದೆ ಇನ್ನಾರೂ ಅದನ್ನು ಪ್ರವೇಶಿಸುವುದಿಲ್ಲ.
Leyl 92:16
ಅವನು ಯಾರೆಂದರೆ ನಿಷೇಧಿಸಿದವನು ಮತ್ತು ಮುಖ ತಿರುಗಿಸಿ ನಡೆದವನು.
Leyl 92:17
ಅತ್ಯಧಿಕ ದೇವಭಯವುಳ್ಳವನನ್ನು ಅದರಿಂದ ದೂರವಿರಿಸಲಾಗುವುದು.
Leyl 92:18
ಅವನು ಯಾರೆಂದರೆ ಪರಿಶುದ್ಧತೆಯನ್ನು ಪಡೆಯುವುದಕ್ಕಾಗಿ ತನ್ನ ಸಂಪತ್ತನ್ನು ನೀಡುವವನು.
Leyl 92:19
ಪ್ರತ್ಯುಪಕಾರವಾಗಿ ಅದನ್ನು ನೀಡಬೇಕಾದ ಯಾವುದೇ ಜರೂರತ್ತು ಅವನೊಡನೆ ಯಾರಿಗೂ ಇಲ್ಲ.[1]
———
[1] ಅಂದರೆ ತನಗೆ ಜನರಿಗೆ ಉಪಕಾರ ಸಿಗಬೇಕು ಎಂಬ ಉದ್ದೇಶದಿಂದ ಅವನು ದಾನ ಮಾಡುವುದಿಲ್ಲ.
Leyl 92:20
ಅತ್ಯುನ್ನತನಾದ ತನ್ನ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಗಾಗಿ ಮಾತ್ರ (ಅವನು ಅದನ್ನು ನೀಡುತ್ತಾನೆ).
Leyl 92:21
ಸದ್ಯವೇ ಅವನು ಸಂತೃಪ್ತನಾಗುವನು.
Duhâ 93:1
ಪೂರ್ವಾಹ್ನದ ಮೇಲಾಣೆ!
Duhâ 93:2
ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.
Duhâ 93:3
(ಪ್ರವಾದಿಯವರೇ) ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ತೊರೆದಿಲ್ಲ ಮತ್ತು ನಿಮ್ಮ ಬಗ್ಗೆ ಬೇಸರಪಟ್ಟಿಲ್ಲ.
Duhâ 93:4
ನಿಶ್ಚಯವಾಗಿಯೂ ನಿಮಗೆ ಇಹಲೋಕಕ್ಕಿಂತಲೂ ಪರಲೋಕವು ಶ್ರೇಷ್ಠವಾಗಿದೆ.
Duhâ 93:5
ನಿಮ್ಮ ಪರಿಪಾಲಕನು (ಅಲ್ಲಾಹು) ಸದ್ಯವೇ ನಿಮಗೆ (ಅನುಗ್ರಹಗಳನ್ನು) ದಯಪಾಲಿಸುವನು. ಆಗ ನೀವು ಸಂತೃಪ್ತರಾಗುವಿರಿ.
Duhâ 93:6
ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯ ನೀಡಲಿಲ್ಲವೇ?
Duhâ 93:7
ಅವನು ನಿಮ್ಮನ್ನು ದಾರಿ ತಪ್ಪಿದವನಾಗಿ ಕಂಡು ನಿಮಗೆ ಮಾರ್ಗದರ್ಶನ ಮಾಡಿದನು.
Duhâ 93:8
ಅವನು ನಿಮ್ಮನ್ನು ಬಡವನಾಗಿ ಕಂಡು ನಿಮಗೆ ಐಶ್ವರ್ಯವನ್ನು ನೀಡಿದನು.
Duhâ 93:9
ಆದ್ದರಿಂದ ನೀವು ಅನಾಥನೊಡನೆ ಕಠಿಣವಾಗಿ ವರ್ತಿಸಬೇಡಿ.
Duhâ 93:10
ಬೇಡುವವನನ್ನು ಗದರಿಸಬೇಡಿ.
Duhâ 93:11
ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳ ಬಗ್ಗೆ ಮಾತನಾಡುತ್ತಿರಿ.
İnşirah 94:1
(ಪ್ರವಾದಿಯವರೇ) ನಾವು ನಿಮಗೆ ನಿಮ್ಮ ಹೃದಯವನ್ನು ತೆರೆದುಕೊಡಲಿಲ್ಲವೇ?
İnşirah 94:2
ನಾವು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಿದೆವು.
İnşirah 94:3
ಅಂದರೆ ನಿಮ್ಮ ಬೆನ್ನು ಮುರಿಯುತ್ತಿದ್ದ (ಭಾರವನ್ನು).
İnşirah 94:4
ನಾವು ನಿಮ್ಮ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆವು.
İnşirah 94:5
ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.
İnşirah 94:6
ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.
İnşirah 94:7
ಆದ್ದರಿಂದ ನಿಮಗೆ ಬಿಡುವು ದೊರೆತರೆ ಆರಾಧನೆಗಳಲ್ಲಿ ಮುಳುಗಿರಿ.
İnşirah 94:8
ನಿಮ್ಮ ಹಂಬಲವನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ತಿರುಗಿಸಿರಿ.
Tin 95:1
ಅಂಜೂರ ಮತ್ತು ಆಲಿವ್‌ನ ಮೇಲಾಣೆ!
Tin 95:2
ತೂರ್ ಸಿನಾಯ್ ಪರ್ವತದ ಮೇಲಾಣೆ!
Tin 95:3
ಈ ನಿರ್ಭಯ ನಗರದ (ಮಕ್ಕಾದ) ಮೇಲಾಣೆ!
Tin 95:4
ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರೂಪದಲ್ಲಿ ಸೃಷ್ಟಿಸಿದೆವು.
Tin 95:5
ನಂತರ ಅವನನ್ನು ನೀಚರಲ್ಲಿ ನೀಚನಾಗಿ ಮಾಡಿದೆವು.
Tin 95:6
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದರಿಂದ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ.
Tin 95:7
ಹಾಗಾದರೆ ಪ್ರತಿಫಲ ದಿನವನ್ನು ನಿಷೇಧಿಸುವಂತೆ ನಿನ್ನನ್ನು ಉತ್ತೇಜಿಸುವುದೇನು?
Tin 95:8
ಅಲ್ಲಾಹು ಎಲ್ಲಾ ತೀರ್ಪುಗಾರರಿಗೂ ತೀರ್ಪುಗಾರನಲ್ಲವೇ?
Alak 96:1
ಸೃಷ್ಟಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ.
Alak 96:2
ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.
Alak 96:3
ಓದಿರಿ. ನಿಮ್ಮ ಪರಿಪಾಲಕ (ಅಲ್ಲಾಹು) ಅತ್ಯುದಾರಿಯಾಗಿದ್ದಾನೆ.
Alak 96:4
ಅವನು ಯಾರೆಂದರೆ ಲೇಖನಿಯ ಮೂಲಕ ಕಲಿಸಿದವನು.
Alak 96:5
ಮನುಷ್ಯನಿಗೆ ತಿಳಿಯದೇ ಇರುವುದನ್ನು ಅವನು ಕಲಿಸಿದನು.[1]
———
[1] ಇವು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಪ್ರಥಮವಾಗಿ ಅವತೀರ್ಣವಾದ ಐದು ವಚನಗಳು. ಅವರು ಹಿರಾ ಗುಹೆಯಲ್ಲಿದ್ದಾಗ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಈ ವಚನಗಳನ್ನು ಅವರಿಗೆ ಓದಿಕೊಟ್ಟರು.
Alak 96:6
ನಿಸ್ಸಂದೇಹವಾಗಿಯೂ ಮನುಷ್ಯನು ಎಲ್ಲೆ ಮೀರಿ ನಡೆಯುತ್ತಾನೆ.
Alak 96:7
ಅದೇಕೆಂದರೆ, ಅವನು ಅವನನ್ನೇ ಸ್ವಯಂ-ಪರ್ಯಾಪ್ತನಾಗಿ ಕಾಣುತ್ತಾನೆ.
Alak 96:8
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗಬೇಕಾಗಿದೆ.
Alak 96:9
ತಡೆಯುವವನನ್ನು ನೀವು ನೋಡಿದ್ದೀರಾ?[1]
———
[1] ತಡೆಯುವವನು ಎಂದರೆ ಪ್ರವಾದಿಯ ಬದ್ಧ ವೈರಿಯಾಗಿದ್ದ ಸತ್ಯನಿಷೇಧಿಗಳ ಮುಖಂಡ ಅಬೂಜಹಲ್. ದಾಸನು ಎಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ). ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುತ್ತಿದ್ದಾಗ ಅಬೂಜಹಲ್ ತಡೆಯಲು ಪ್ರಯತ್ನಿಸಿದ್ದನು.
Alak 96:10
ದಾಸನನ್ನು—ಅವನು ನಮಾಝ್ ಮಾಡುವಾಗ.
Alak 96:11
ನೀವು ನೋಡಿದ್ದೀರಾ—ಒಂದು ವೇಳೆ ಅವನು (ದಾಸನು) ಸನ್ಮಾರ್ಗದಲ್ಲಿದ್ದರೆ.
Alak 96:12
ಅಥವಾ ಅವನು ದೇವಭಯವಿಟ್ಟುಕೊಳ್ಳಲು ಆದೇಶಿಸಿದ್ದರೆ.
Alak 96:13
ನೀವು ನೋಡಿದ್ದೀರಾ—ಒಂದು ವೇಳೆ ಅವನು (ತಡೆಯುವವನು) ನಿಷೇಧಿಸಿದ್ದರೆ ಮತ್ತು ವಿಮುಖನಾಗಿದ್ದರೆ.
Alak 96:14
ಅಲ್ಲಾಹು ಅವನನ್ನು ನೋಡುತ್ತಿದ್ದಾನೆಂದು ಅವನಿಗೆ ತಿಳಿದಿಲ್ಲವೇ?
Alak 96:15
ಅವನು ದೂರ ಸರಿಯದಿದ್ದರೆ ನಾವು ಖಂಡಿತವಾಗಿಯೂ ಅವನ ಮುಂದಲೆಯನ್ನು ಹಿಡಿದು ಎಳೆಯುವೆವು.
Alak 96:16
ಸುಳ್ಳು ಹೇಳುವ, ಪಾಪವೆಸಗುವ ಮುಂದಲೆ.
Alak 96:17
ಅವನು ತನ್ನ ಸಭಾ ಸದಸ್ಯರನ್ನು ಕರೆಯಲಿ.
Alak 96:18
ನಾವು (ನರಕದಲ್ಲಿ) ಶಿಕ್ಷೆ ನೀಡುವ ದೇವದೂತರನ್ನು ಕರೆಯುವೆವು.
Alak 96:19
ಎಚ್ಚರಾ! ಅವನ ಮಾತನ್ನು ಎಂದಿಗೂ ಕೇಳಬೇಡಿ. (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿರಿ ಮತ್ತು ಅವನಿಗೆ ಸಮೀಪವಾಗಿರಿ.
Kadr 97:1
ನಿಶ್ಚಯವಾಗಿಯೂ ನಾವು ಇದನ್ನು (ಕುರ್‌ಆನನ್ನು) ನಿರ್ಣಯದ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ.[1]
———
[1] ನಿರ್ಣಯದ ರಾತ್ರಿ (ಲೈಲತುಲ್ ಕದ್ರ್) ಯಲ್ಲಿ ಪವಿತ್ರ ಕುರ್‌ಆನ್ ಅನ್ನು ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಿಂದ ಆಕಾಶದಲ್ಲಿರುವ ಬೈತುಲ್ ಇಝ್ಝತ್‌ಗೆ ಇಳಿಸಲಾಯಿತು. ಅಲ್ಲಿಂದ ಅದು 23 ವರ್ಷಗಳ ಕಾಲ ಹಂತ ಹಂತವಾಗಿ ಮತ್ತು ಸಾಂದರ್ಭಿಕವಾಗಿ ಭೂಲೋಕಕ್ಕೆ ಅವತೀರ್ಣವಾಯಿತು. ನಿರ್ಣಯದ ರಾತ್ರಿ (ಲೈಲತುಲ್ ಕದ್ರ್) ರಮದಾನ್ ತಿಂಗಳ ಕೊನೆಯ ಹತ್ತರ ಬೆಸ ರಾತ್ರಿಗಳಲ್ಲಿ ಬರುತ್ತದೆ.
Kadr 97:2
ನಿರ್ಣಯದ ರಾತ್ರಿ ಏನೆಂದು ನಿಮಗೇನು ಗೊತ್ತು?
Kadr 97:3
ನಿರ್ಣಯದ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ.
Kadr 97:4
ಆ ರಾತ್ರಿಯಲ್ಲಿ ಎಲ್ಲಾ ಕಾರ್ಯಗಳನ್ನು ಜಾರಿಗೊಳಿಸುವುದಕ್ಕಾಗಿ ದೇವದೂತರುಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಪರಿಪಾಲಕನ (ಅಲ್ಲಾಹನ) ಅಪ್ಪಣೆಯೊಂದಿಗೆ ಇಳಿದು ಬರುವರು.
Kadr 97:5
ಆ ರಾತ್ರಿಯು ಪ್ರಭಾತೋದಯದ ತನಕ ಸಂಪೂರ್ಣ ಶಾಂತಿಯುತವಾಗಿರುವುದು.
Beyyine 98:1
ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳು ಮತ್ತು ಬಹುದೇವವಿಶ್ವಾಸಿಗಳು ಸ್ಪಷ್ಟ ಸಾಕ್ಷ್ಯವು ಅವರ ಬಳಿಗೆ ಬರುವ ತನಕ (ಸತ್ಯನಿಷೇಧದಿಂದ) ದೂರವಾಗುವವರಾಗಿರಲಿಲ್ಲ.
Beyyine 98:2
(ಆ ಸಾಕ್ಷ್ಯವು) ಪರಿಶುದ್ಧ ಗ್ರಂಥಗಳನ್ನು ಓದಿಕೊಡುವ ಅಲ್ಲಾಹನ ಕಡೆಯ ಸಂದೇಶವಾಹಕರಾಗಿದ್ದಾರೆ.
Beyyine 98:3
ಅದರಲ್ಲಿ (ಆ ಗ್ರಂಥದಲ್ಲಿ) ಸರಿಯಾದ ನಿಯಮಗಳಿವೆ.
Beyyine 98:4
ಗ್ರಂಥ ನೀಡಲಾದವರು ಅವರ ಬಳಿಗೆ ಸ್ಪಷ್ಟ ಸಾಕ್ಷ್ಯವು ಬಂದ ಬಳಿಕವೇ (ಭಿನ್ನಮತ ತಳೆದು) ವಿಭಿನ್ನ ಪಂಗಡಗಳಾದರು.
Beyyine 98:5
ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕವಾಗಿಸಿ ಏಕನಿಷ್ಠರಾಗಿ ಅವನನ್ನು ಮಾತ್ರ ಆರಾಧಿಸಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ ಎಂದಲ್ಲದೆ ಬೇರೇನನ್ನೂ ಅವರಿಗೆ ಆದೇಶಿಸಲಾಗಿರಲಿಲ್ಲ. ಅದೇ ನೇರವಾದ ಧರ್ಮ.
Beyyine 98:6
ನಿಶ್ಚಯವಾಗಿಯೂ ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳು ಮತ್ತು ಬಹುದೇವವಿಶ್ವಾಸಿಗಳು ನರಕವಾಸಿಗಳಾಗಿದ್ದಾರೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರು ಸೃಷ್ಟಿಗಳಲ್ಲೇ ಅತಿನಿಕೃಷ್ಟರು.
Beyyine 98:7
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರು ಸೃಷ್ಟಿಗಳಲ್ಲೇ ಅತಿಶ್ರೇಷ್ಠರು.
Beyyine 98:8
ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿಯಿರುವ ಪ್ರತಿಫಲವು ಶಾಶ್ವತವಾಸದ ಸ್ವರ್ಗೋದ್ಯಾನಗಳಾಗಿವೆ. ಅವುಗಳ ತಳಭಾಗದಿಂದ ನದಿಗಳು ಹರಿಯುತ್ತವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂಪ್ರೀನಾಗಿದ್ದಾನೆ ಮತ್ತು ಅವರು ಅಲ್ಲಾಹನ ಬಗ್ಗೆ ಸಂಪ್ರೀತರಾಗಿದ್ದಾರೆ. ಇದು ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವನಿಗೆ ಇರುವುದಾಗಿದೆ.
Zilzal 99:1
ಭೂಮಿಯನ್ನು ಸಂಪೂರ್ಣವಾಗಿ ನಡುಗಿಸಲಾಗುವಾಗ,
Zilzal 99:2
ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ,[1]
———
[1] ಅಂದರೆ ಭೂಮಿ ತೀವ್ರವಾಗಿ ಕಂಪಿಸಿ ಅದರಲ್ಲಿರುವ ಎಲ್ಲವೂ ನುಚ್ಚು ನೂರಾಗುತ್ತದೆ. ಇದು ಕಹಳೆಯಲ್ಲಿ ಪ್ರಥಮ ಬಾರಿ ಊದುವಾಗ ಸಂಭವಿಸುತ್ತದೆ.
Zilzal 99:3
“ಇದಕ್ಕೇನಾಗಿದೆ?” ಎಂದು ಮನುಷ್ಯನು ಕೇಳುವನು.
Zilzal 99:4
ಅಂದು ಅದು (ಭೂಮಿ) ತನ್ನ ಎಲ್ಲಾ ಸಮಾಚಾರಗಳನ್ನು ತಿಳಿಸುವುದು.
Zilzal 99:5
ನಿಮ್ಮ ಪರಿಪಾಲಕನು (ಅಲ್ಲಾಹು) ಅದಕ್ಕೆ ಆದೇಶ ನೀಡಿದ ಕಾರಣದಿಂದ.
Zilzal 99:6
ಅಂದು ಮನುಷ್ಯರು ವಿಭಿನ್ನ ಗುಂಪುಗಳಾಗಿ ಮರಳುವರು—ಅವರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ.
Zilzal 99:7
ಆದ್ದರಿಂದ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿದ್ದಾನೋ ಅವನು ಅದನ್ನು ನೋಡುವನು.
Zilzal 99:8
ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿದ್ದಾನೋ ಅವನು ಅದನ್ನು ನೋಡುವನು.
Adiyat 100:1
ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ!
Adiyat 100:2
ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ!
Adiyat 100:3
ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ!
Adiyat 100:4
ಆಗ ಅವು ಧೂಳನ್ನು ಹರಡುತ್ತವೆ.
Adiyat 100:5
ನಂತರ ಅದರ ಮೂಲಕ ಸೈನ್ಯಗಳ ನಡುಭಾಗಕ್ಕೆ ನುಗ್ಗುತ್ತವೆ.
Adiyat 100:6
ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ.
Adiyat 100:7
ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ.
Adiyat 100:8
ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ.
Adiyat 100:9
ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ?
Adiyat 100:10
ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ).
Adiyat 100:11
ನಿಶ್ಚಯವಾಗಿಯೂ ಅಂದು ಅವರ ಪರಿಪಾಲಕನು (ಅಲ್ಲಾಹು) ಅವರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.
Karia 101:1
ಆ ಭಯಾನಕ ಸದ್ದು.
Karia 101:2
ಆ ಭಯಾನಕ ಸದ್ದು ಎಂದರೇನು?
Karia 101:3
ಆ ಭಯಾನಕ ಸದ್ದು ಏನೆಂದು ನಿಮಗೇನು ಗೊತ್ತು?
Karia 101:4
ಮನುಷ್ಯರು ಚದುರಿದ ಹಾತೆಗಳಂತಾಗುವ ದಿನ.
Karia 101:5
ಪರ್ವತಗಳು ಕೆದರಿದ ತುಪ್ಪಳದಂತಾಗುವ ದಿನ.
Karia 101:6
ಆಗ ಯಾರ ತಕ್ಕಡಿಗಳು ಭಾರವಾಗುತ್ತದೋ,
Karia 101:7
ಅವನು ಸಂತೃಪ್ತ ಜೀವನದಲ್ಲಿರುವನು.
Karia 101:8
ಆದರೆ ಯಾರ ತಕ್ಕಡಿಗಳು ಹಗುರವಾಗುತ್ತದೋ,
Karia 101:9
ಅವನ ವಾಸಸ್ಥಳವು ಹಾವಿಯ ಆಗಿರುವುದು.
Karia 101:10
ಅದು (ಹಾವಿಯ) ಏನೆಂದು ನಿಮಗೇನು ಗೊತ್ತು?
Karia 101:11
ಅದು ತೀವ್ರ ಶಾಖವಿರುವ ಬೆಂಕಿಯಾಗಿದೆ.
Tekâsür 102:1
ಹೆಚ್ಚು ಸಿಗಬೇಕೆಂಬ ನಿಮ್ಮ ದುರಾಸೆಯು ನಿಮ್ಮನ್ನು ಅಲಕ್ಷ್ಯದಲ್ಲಿರಿಸಿದೆ.
Tekâsür 102:2
ಎಲ್ಲಿಯವರೆಗೆಂದರೆ ನೀವು ಸಮಾಧಿ ಸ್ಥಳವನ್ನು ತಲುಪುವ ತನಕ.
Tekâsür 102:3
ಇಲ್ಲವೇ ಇಲ್ಲ, ಸದ್ಯವೇ ನೀವು ತಿಳಿಯುವಿರಿ.
Tekâsür 102:4
ಇಲ್ಲವೇ ಇಲ್ಲ, ನಂತರ ನಿಮಗೆ (ಎಲ್ಲವೂ) ತಿಳಿಯಲಿದೆ.
Tekâsür 102:5
ಇಲ್ಲವೇ ಇಲ್ಲ, ನೀವು ದೃಢವಾಗಿ ತಿಳಿದಿರುತ್ತಿದ್ದರೆ.
Tekâsür 102:6
ಖಂಡಿತವಾಗಿಯೂ ನೀವು ನರಕವನ್ನು ನೋಡುವಿರಿ.
Tekâsür 102:7
ನಂತರ ನೀವು ಅದನ್ನು ಖಚಿತವಾದ ಕಣ್ಣುಗಳಿಂದ ನೋಡುವಿರಿ.
Tekâsür 102:8
ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು.
Asr 103:1
ಕಾಲದ ಮೇಲಾಣೆ!
Asr 103:2
ನಿಶ್ಚಯವಾಗಿಯೂ ಮನುಷ್ಯರು ಸಂಪೂರ್ಣ ನಷ್ಟದಲ್ಲಿದ್ದಾರೆ.
Asr 103:3
ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಪರಸ್ಪರ ಸತ್ಯವನ್ನು ಉಪದೇಶಿಸಿದವರು ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸಿದವರು ಇದಕ್ಕೆ ಹೊರತಾಗಿದ್ದಾರೆ.
Hümezeh 104:1
ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ.
Hümezeh 104:2
ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು.
Hümezeh 104:3
ಅವನ ಸಂಪತ್ತು ಅವನನ್ನು ಶಾಶ್ವತಗೊಳಿಸುತ್ತದೆ ಎಂದು ಅವನು ಭಾವಿಸುತ್ತಾನೆ.
Hümezeh 104:4
ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು.
Hümezeh 104:5
ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು?
Hümezeh 104:6
ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ.
Hümezeh 104:7
ಅದು ಹೃದಯಗಳ ಮೇಲೆ ಏರಿ ಬರುತ್ತದೆ.
Hümezeh 104:8
ಅದು ಅವರನ್ನು ಎಲ್ಲಾ ಕಡೆಗಳಿಂದಲೂ ಮುಚ್ಚಿಕೊಳ್ಳುತ್ತದೆ.
Hümezeh 104:9
ದೊಡ್ಡ ದೊಡ್ಡ ಸ್ತಂಭಗಳಲ್ಲಿ.
Fil 105:1
ನಿಮ್ಮ ಪರಿಪಾಲಕನು (ಅಲ್ಲಾಹು) ಆನೆಯ ಜನರೊಡನೆ ಹೇಗೆ ವರ್ತಿಸಿದನೆಂದು ನೀವು ನೋಡಿಲ್ಲವೇ?[1]
———
[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನನಕ್ಕಿಂತ ಕೆಲವೇ ತಿಂಗಳ ಹಿಂದೆ ಸಂಭವಿಸಿದ ಒಂದು ಘಟನೆಯನ್ನು ಇಲ್ಲಿ ತಿಳಿಸಲಾಗಿದೆ. ಅಂದು ಯಮನ್ ರಾಜ್ಯವು ಇಥಿಯೋಪಿಯಾ ದೇಶದ ರಾಜನ ವಶದಲ್ಲಿತ್ತು. ಯಮನ್ ರಾಜ್ಯವನ್ನು ಅವನ ಅಧೀನದಲ್ಲಿದ್ದ ಅಬ್ರಹತ್ ಎಂಬ ಅರಸ ಆಳುತ್ತಿದ್ದನು. ಯಮನ್‍ನಲ್ಲಿ ಮಹಾ ದೇವಾಲಯವೊಂದನ್ನು ನಿರ್ಮಿಸಿ ಅದನ್ನು ಅರಬ್ಬರ ತೀರ್ಥಾಟನಾ ಕೇಂದ್ರವಾಗಿ ಮಾಡಿ ಅವರ ಗಮನವನ್ನು ಕಅಬಾಲಯದಿಂದ ಯಮನ್‌ಗೆ ತಿರುಗಿಸಬೇಕೆಂದು ಆತ ಯೋಜನೆ ಹಾಕಿದ್ದ. ಆದರೆ ಅರಬ್ಬರು ಅದನ್ನು ತಿರಸ್ಕರಿಸಿದ್ದರಿಂದ ಹತಾಶನಾದ ಆತ ಕಅಬಾಲಯವನ್ನೇ ಕೆಡವಿ ಹಾಕಲು ಆನೆಯ ಸೈನ್ಯದೊಂದಿಗೆ ಮಕ್ಕಾಗೆ ಹೊರಟ. ಕಅಬಾಲಯದ ಪರಿಪಾಲಕರಾಗಿದ್ದ ಕುರೈಶರಿಗೆ ಅವನ ಮಹಾ ಸೈನ್ಯವನ್ನು ಎದುರಿಸುವ ತಾಕತ್ತಿರಲಿಲ್ಲ. ಪ್ರತಿರೋಧಿಸಲು ಸಾಧ್ಯವಾಗದ್ದರಿಂದ ಅವರು ಅದರ ಸಂರಕ್ಷಣೆಯ ಭಾರವನ್ನು ಅಲ್ಲಾಹನಿಗೆ ವಹಿಸಿಕೊಟ್ಟು ಗುಡ್ಡಗಳಿಗೆ ಹೋಗಿ ನೆಲೆಸಿದರು. ಈ ಸಂದರ್ಭದಲ್ಲಿ ಅಸಾಮಾನ್ಯ ಘಟನೆಯ ಮೂಲಕ ಅಲ್ಲಾಹು ಅಬ್ರಹತ್‌ನ ಸೈನ್ಯವನ್ನು ನಾಶ ಮಾಡಿದನು. ಸುಟ್ಟ ಜೇಡಿ ಮಣ್ಣಿನ ಕಲ್ಲುಗಳನ್ನು ಅವರ ಮೇಲೆಸೆಯಲು ಅಲ್ಲಾಹು ಹಕ್ಕಿಗಳ ಗುಂಪುಗಳನ್ನು ಕಳುಹಿಸಿದನು. ಆ ಕಲ್ಲುಗಳು ಅವರನ್ನು ನಾಶ ಮಾಡಿದವು. ಪವಿತ್ರ ಕಅಬಾಲಯಕ್ಕೆ ಯಾವುದೇ ಹಾನಿಯಾಗದೆ ದಾಳಿಕೋರರು ನಾಶವಾದರು. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಪ್ರವಾದಿಯಾದ ಆರಂಭಕಾಲದಲ್ಲಿ ಕುರೈಶರು ಅಬ್ರಹತ್‌ನ ಈ ನಾಶವನ್ನು ತಮ್ಮ ಇತಿಹಾಸದಲ್ಲಿ ಜರಗಿದ ಮಹಾ ಘಟನೆಯೆಂದು ಪರಿಗಣಿಸಿದ್ದರು.
Fil 105:2
ಅವನು ಅವರ ತಂತ್ರವನ್ನು ವಿಫಲಗೊಳಿಸಲಿಲ್ಲವೇ?
Fil 105:3
ಅವನು ಅವರ ಮೇಲೆ ಹಕ್ಕಿಗಳನ್ನು ಹಿಂಡು ಹಿಂಡಾಗಿ ಕಳುಹಿಸಿದನು.
Fil 105:4
ಅವು ಸುಟ್ಟ ಜೇಡಿಮಣ್ಣಿನ ಕಲ್ಲುಗಳನ್ನು ಅವರ ಮೇಲೆ ಎಸೆಯುತ್ತಿದ್ದವು.
Fil 105:5
ನಂತರ ಅವನು ಅವರನ್ನು (ಜಾನುವಾರುಗಳು) ತಿಂದ ಒಣಹುಲ್ಲಿನಂತೆ ಮಾಡಿದನು.
Kureyş 106:1
ಕುರೈಷರನ್ನು ಪರಿಚಿತಗೊಳಿಸುವುದಕ್ಕಾಗಿ.[1]
———
[1] ಕುರೈಷ್ ಗೋತ್ರವು ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿತ್ತು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಗೋತ್ರದ ಬನೂ ಹಾಶಿಮ್ ಕುಟುಂಬದಲ್ಲಿ ಹುಟ್ಟಿದ್ದರು. ಕುರೈಷರು ಪವಿತ್ರ ಕಅಬಾಲಯದ ಪರಿಪಾಲಕರಾಗಿದ್ದರಿಂದ ಅರೇಬಿಯನ್ ಪರ್ಯಾಯ ದ್ವೀಪದ ಎಲ್ಲಾ ಗೋತ್ರಗಳು ಅವರನ್ನು ಗೌರವಿಸುತ್ತಿದ್ದವು. ಈ ಕಾರಣದಿಂದ ಅವರ ವ್ಯಾಪಾರ ಪ್ರಯಾಣಗಳು ಸುರಕ್ಷಿತವಾಗಿದ್ದವು. ವ್ಯಾಪಾರವು ಕುರೈಷರ ಪ್ರಮುಖ ವೃತ್ತಿಯಾಗಿದ್ದು ಅವರು ಬೇಸಿಗೆಗಾಲದಲ್ಲಿ ಶಾಮ್ (ಈಗಿನ ಸಿರಿಯಾ-ಜೋರ್ಡಾನ್-ಪ್ಯಾಲಸ್ತೀನ್) ಗೆ ಮತ್ತು ಚಳಿಗಾಲದಲ್ಲಿ ಯಮನ್‌ಗೆ ವ್ಯಾಪಾರ ನಿಮಿತ್ತ ಪ್ರಯಾಣ ಮಾಡುತ್ತಿದ್ದರು.
Kureyş 106:2
ಅಂದರೆ ಅವರಿಗೆ ಚಳಿ ಮತ್ತು ಬೇಸಿಗೆಯ ಪ್ರಯಾಣಗಳನ್ನು ಪರಿಚಿತಗೊಳಿಸುವುದಕ್ಕಾಗಿ.
Kureyş 106:3
ಆದ್ದರಿಂದ ಅವರು ಈ ಭವನದ (ಕಅಬಾಲಯದ) ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಲಿ.
Kureyş 106:4
ಅವನು ಯಾರೆಂದರೆ ಅವರು ಹಸಿದಿರುವಾಗ ಅವರಿಗೆ ಆಹಾರವನ್ನು ಒದಗಿಸಿದವನು ಮತ್ತು ಅವರು ಭಯದಲ್ಲಿದ್ದಾಗ ಅವರಿಗೆ ನಿರ್ಭಯವನ್ನು ನೀಡಿದವನು.
Mâûn 107:1
ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ?
Mâûn 107:2
ಅವನೇ ಅನಾಥನನ್ನು ಹೊರತಳ್ಳುವವನು.
Mâûn 107:3
ಅವನು ಬಡವನಿಗೆ ಅನ್ನ ನೀಡಲು ಉತ್ತೇಜಿಸುವುದಿಲ್ಲ.
Mâûn 107:4
ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ.
Mâûn 107:5
ಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು
Mâûn 107:6
ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ.
Mâûn 107:7
ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ.
Kevser 108:1
ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ.[1]
———
[1] ಕೌಸರ್‌ಗೆ ಹೇರಳ ಒಳಿತು ಎಂಬ ಅರ್ಥವಿದೆ. ಅಂದರೆ ಪರಲೋಕದಲ್ಲಿ ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇರಳ ಒಳಿತುಗಳನ್ನು ನೀಡುವನು. ಇದರ ಇನ್ನೊಂದು ಅರ್ಥವೇನೆಂದರೆ ಪರಲೋಕದಲ್ಲಿರುವ ಕೌಸರ್ ಎಂಬ ಹೆಸರಿನ ಕೊಳ ಅಥವಾ ಸರೋವರ. ಇದರ ನೀರು ಕುಡಿದವನಿಗೆ ಮತ್ತೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ. ಈ ಸರೋವರವನ್ನು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡುವನು ಮತ್ತು ಅವರು ತಮ್ಮ ಸಮುದಾಯದಲ್ಲಿ ಸೇರಿದ ಸತ್ಯವಿಶ್ವಾಸಿಗಳಿಗೆ ಇದರ ನೀರನ್ನು ಕುಡಿಸುವರು.
Kevser 108:2
ಆದ್ದರಿಂದ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಮಾಝ್ ಮಾಡಿರಿ ಮತ್ತು ಬಲಿ ಅರ್ಪಿಸಿರಿ.
Kevser 108:3
ನಿಶ್ಚಯವಾಗಿಯೂ ನಿಮ್ಮ ವೈರಿಯೇ ವಾರಸುದಾರನಿಲ್ಲದವನು.[1]
———
[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಂಡು ಮಕ್ಕಳೆಲ್ಲರೂ ಚಿಕ್ಕಂದಿನಲ್ಲೇ ಅಸುನೀಗಿದ್ದರು. ಆದ್ದರಿಂದ ಅವರನ್ನು ತಮಾಷೆ ಮಾಡುತ್ತಾ ವೈರಿಗಳು ಅಬ್ತರ್ (ವಾರಸುದಾರನಿಲ್ಲದವನು, ವಂಶವಿಲ್ಲದವನು) ಎಂದು ಕರೆಯುತ್ತಿದ್ದರು. ಅಲ್ಲಾಹು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಾನಪಡಿಸುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು.
Kâfirun 109:1
ಹೇಳಿರಿ: “ಓ ಸತ್ಯನಿಷೇಧಿಗಳೇ!
Kâfirun 109:2
ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ.
Kâfirun 109:3
ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ.
Kâfirun 109:4
ನೀವು ಆರಾಧಿಸುವುದನ್ನು ನಾನು ಆರಾಧಿಸುವುದಿಲ್ಲ.
Kâfirun 109:5
ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ.
Kâfirun 109:6
ನಿಮಗೆ ನಿಮ್ಮ ಧರ್ಮ. ನನಗೆ ನನ್ನ ಧರ್ಮ.”
Nasr 110:1
ಅಲ್ಲಾಹನ ಸಹಾಯ ಮತ್ತು (ಮಕ್ಕಾ) ವಿಜಯ ಬಂದಾಗ.
Nasr 110:2
ಜನರು ಅಲ್ಲಾಹನ ಧರ್ಮಕ್ಕೆ ತಂಡೋಪತಂಡವಾಗಿ ಪ್ರವೇಶಿಸುವುದನ್ನು ನೀವು ನೋಡುವಾಗ.
Nasr 110:3
ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧಿಯನ್ನು ಕೊಂಡಾಡಿರಿ. ಅವನೊಡನೆ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ.
Tebbet 111:1
ಅಬೂಲಹಬನ[1] ಎರಡೂ ಕೈಗಳು ನಾಶವಾದವು. ಅವನು ಕೂಡ ನಾಶವಾದನು.
———
[1] ಅಬೂಲಹಬ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದೆಯ ಸಹೋದರ. ಆತ ಇಸ್ಲಾಮಿನ ಮತ್ತು ಮುಸ್ಲಿಮರ ಕಡು ವೈರಿಯಾಗಿದ್ದ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧರ್ಮಪ್ರಚಾರ ಮಾಡಲು ಹೋದಲ್ಲೆಲ್ಲಾ ಈತ ಅವರನ್ನು ಹಿಂಬಾಲಿಸಿ, ಅವನು ಸುಳ್ಳ ಅವನ ಮಾತನ್ನು ಕೇಳಬೇಡಿ ಎನ್ನುತ್ತಿದ್ದ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕುಟುಂಬದವನ್ನು ಕರೆದು ಅವರಿಗೆ ಏಕದೇವವಿಶ್ವಾಸವನ್ನು ಬೋಧಿಸಿದಾಗ ಈತ ಕೋಪದಿಂದ ಮಣ್ಣು ಬಾಚಿ ಎಸೆದು “ಓ ಮುಹಮ್ಮದ್, ನೀನು ನಾಶವಾಗಿ ಹೋಗು” ಎಂದಿದ್ದ. ಇದಕ್ಕೆ ಉತ್ತರವಾಗಿ ಈ ಅಧ್ಯಾಯವು ಅವತೀರ್ಣವಾಯಿತು.
Tebbet 111:2
ಅವನ ಆಸ್ತಿ ಅಥವಾ ಅವನ ಸಂಪಾದನೆ ಅವನ ಪ್ರಯೋಜನಕ್ಕೆ ಬರಲಿಲ್ಲ.
Tebbet 111:3
ಅವನು ಸದ್ಯವೇ ಜ್ವಲಿಸುವ ನರಕವನ್ನು ಪ್ರವೇಶಿಸುವನು.
Tebbet 111:4
ಸೌದೆ ಹೊರುವವಳಾದ ಅವನ ಹೆಂಡತಿಯು ಕೂಡ (ಅವನೊಡನೆ ಪ್ರವೇಶಿಸುವಳು).[1]
———
[1] ಅಬೂಲಹಬನ ಹೆಂಡತಿ ಉಮ್ಮು ಜಮೀಲ್ ಇಸ್ಲಾಮನ್ನು ದ್ವೇಷಿಸುವುದರಲ್ಲಿ ಗಂಡನಿಗೆ ಯಾವುದೇ ವಿಧದಲ್ಲೂ ಕಡಿಮೆಯಿರಲಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡೆಯುವ ದಾರಿಯಲ್ಲಿ ಆಕೆ ಕಸ-ಕಡ್ಡಿಗಳನ್ನು ಮತ್ತು ಮುಳ್ಳುಗಳನ್ನು ಎಸೆಯುತ್ತಿದ್ದಳು. ನರಕದಲ್ಲಿ ಗಂಡ ಉರಿಯುವಾಗ ಈಕೆ ಆ ಬೆಂಕಿಗೆ ಸೌದೆಗಳನ್ನು ತಂದು ಸುರಿದು ಬೆಂಕಿ ಇನ್ನಷ್ಟು ಜ್ವಾಲೆಗಳೊಂದಿಗೆ ಉರಿಯುವಂತೆ ಮಾಡುತ್ತಾಳೆ ಎಂದು ಕೆಲವರು ಇದನ್ನು ವ್ಯಾಖ್ಯಾನಿಸಿದ್ದಾರೆ.
Tebbet 111:5
ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನಿಂದ ತಯಾರಿಸಿದ ಹಗ್ಗವಿರುವುದು.
İhlas 112:1
ಹೇಳಿರಿ: “ಅವನು ಅಲ್ಲಾಹು, ಏಕೈಕನು.
İhlas 112:2
ಅಲ್ಲಾಹು ನಿರಪೇಕ್ಷನು.
İhlas 112:3
ಅವನು ಯಾರಿಗೂ ಜನ್ಮವನ್ನು ನೀಡಿಲ್ಲ. ಅವನು ಯಾರಿಂದಲೂ ಜನ್ಮವನ್ನು ಪಡೆದಿಲ್ಲ.
İhlas 112:4
ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ.”
Felak 113:1
ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.
Felak 113:2
ಅವನು ಸೃಷ್ಟಿಸಿದ ಎಲ್ಲಾ ವಸ್ತುಗಳ ಕೇಡಿನಿಂದ.
Felak 113:3
ಕಾರ್ಗತ್ತಲೆಯ ರಾತ್ರಿಯ ಕೆಡುಕಿನಿಂದ—ಅದರ ಕತ್ತಲೆಯು ಆವರಿಸುವಾಗ.
Felak 113:4
ಗಂಟುಗಳನ್ನು ಹಾಕಿ ಅದಕ್ಕೆ ಊದುವ ಮಾಟಗಾತಿಯರ ಕೆಡುಕಿನಿಂದ.
Felak 113:5
ಅಸೂಯೆಪಡುವವನ ಕೆಡುಕಿನಿಂದ—ಅವನು ಅಸೂಯೆಪಡುವಾಗ.”
Nas 114:1
ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ.
Nas 114:2
ಮನುಷ್ಯರ ಒಡೆಯನಲ್ಲಿ.
Nas 114:3
ಮನುಷ್ಯರ ದೇವನಲ್ಲಿ.
Nas 114:4
ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ.
Nas 114:5
ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು.
Nas 114:6
ಅವರು ಜಿನ್ನ್‌ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.”